My Blogs

Friday, February 28, 2020


ಜೀವನಾನುಭವ!


ಚಿಂತೆಗಳು ಮನಸೆಂಬ ಕೋಟೆಯಲ್ಲಿರಲು

ಚಿತೆಯೇರುವ ತನಕ ಕದನ ಮನದೊಳು

ಚಿಂತೆಚಿತೆಯ ಮದ್ಯೆ ಚಿಂತನೆಮಾಡೆಂದ ಬಿಳಿಗಿರಿ - 1


ಸಮಯದ ಪರಿಧಿಯೇ ಪ್ರಕೃತಿಗೆ

ಸಂತರ ರೀತಿ ಪರಿತ್ಯಾಗಿ ಜನಕೆ

ಸ್ವಲೋಭಕೆ ಮನುಜ ನಾಶವೆಂದ ಬಿಳಿಗಿರಿ - 2


ಮನದ ಕೋಟೆಯಲಿ ಕೆಸರ ತುಂಬಿಕೊಂಡು

ಮಾತು ಹಸಿರಾಡಿದರೇನು ಪ್ರಯೋಜನ

ಮನವೆಂಬ ಮನೆಗೆ ಪ್ರೀತಿ ಇಟ್ಟಿಗೆಯೆಂದ ಬಿಳಿಗಿರಿ - 3


ಕತ್ತಲು ಬೆಳಕಿನ ಮದ್ಯೆ ಆಟವಾಡಿ

ಕರಬುತನದಿ ಕಿಕ್ಕೇರಿದ ಮನುಜ ಮನ

ಕಾಲ ಕಂಡಾಗ ಹಲುಬಿತೆಂದ ಬಿಳಿಗಿರಿ - 4


ವಾರಿಧಿಗೆ ಸೇರುವ ನದಿಯ ರೂಪ

ವಿವಿಧ ಚಹರೆಗೆ ತಿರುಗುವುದಾದರೂ

ವಂಚನೆಯಿಲ್ಲದೆ ದಾಹ ತಣಿಸುವುದೆಂದ ಬಿಳಿಗಿರಿ - 5


ದೋಣಿಯೋ ಸೇತುವೆಯೋ ಬೇಕು ಜೀವನಕೆ

ದಿಗಂತದ ರವಿ ಬೇಕು ಮಾರ್ಗದರ್ಶನಕೆ

ಧೈರ್ಯವೇ ಜೀವನದ ಬೆಳಕೆಂದ ಬಿಳಿಗಿರಿ - 6


ದುರ್ಗದ ಹಾದಿ ಅತಿ ಕಠಿಣ

ದರ್ಪ ತೋರದ ಮೃದು ಮನಕೆ

ದಾರಿಯ ಮಂದಿ ಹಸಿರೆಂದ ಬಿಳಿಗಿರಿ - 7


ಹರಿವ ನೀರ ರಭಸ ತಡೆಯಲಾಗದು

ಹರೆಯ ಮನಸ ಯೋಚನೆ ಜಲಪಾತ

ಹಮ್ಮಿಲ್ಲದ ಬದುಕು ಹಸಿರೆಂದ ಬಿಳಿಗಿರಿ - 8


ಬದುಕು ವಿಧಿಯ ಮೆಟ್ಟಿಲು

ಬರುವ ಹಾದಿಯಾ ಉಪಭೋಗಕೆ

ಬರಲಿ ಸಮಚಿತ್ತವೆಂದ ಬಿಳಿಗಿರಿ - 9


ಹಂತ ಹಂತವಾಗಿ ಬೆಳೆವ ಗಿಡಮರ

ಹಾದಿಗೆ ಒಮ್ಮೆ ಒಂದೇ ಹೆಜ್ಜೆ ಮನುಜ

ಹರುಷದಿ ಇಡು ಪಾಠ ತಿಳಿಸಿತೆಂದ ಬಿಳಿಗಿರಿ - 10


ಮನ ಓಡುವುದು ಜಲಪಾತ ರೀತಿ

ಮಂಥನವಾದರೆ ಮನುಜ ಪಥ

ಮಾಯಾಜಾಲ ಬದುಕು ಸುಂದರವೆಂದ ಬಿಳಿಗಿರಿ - 11


ಅನಂತದಲ್ಲಿ ಕಂಡ ಕಡು ಕಿತ್ತಳೆಗೆ

ಆಂತರ್ಯದಲ್ಲಿ ಮೂಡುವುದು ತಿಳಿಭಾವ

ಅನುದಿನವೂ ಅನುಭವಿಸೆಂದ ಬಿಳಿಗಿರಿ - 12


ಹಾಲ್ಗಡಲ ಮನಸ ಭೋರ್ಗರೆತ ದುಮ್ಮಿಕ್ಕುವಾಗ

ಹಲವು ಕಠಿಣ ಬಂಡೆಯು ಹಾದಿಗೆ ಅಡೆತಡೆಯು

ಹರೆಯರಿಗಾಗ ತೋರುವೆ ಸರಿದಾರಿಯೆಂದ ಬಿಳಿಗಿರಿ - 13


ಆಗಸಕ್ಕೆ ಚುಂಬಿಸುವ ಮರಗಳು

ಅದಮ್ಯ ಚಿಂತನೆ ತೂರುತಿರೆ

ಅಂತರಂಗಕೆ ಸಂತಸವೆಂದ ಬಿಳಿಗಿರಿ - 14


ಛಲಗಾರನಂತೆ ನಿಂತಿರುವ ಮಲೆಯ ನೋಟ

ಚಿತ್ತಾರದ ಉದಕಮಂಡಲದ ಅಂತರ್ಯ ಹೇಳಿತು

ಚಂಚಲವಿಲ್ಲದ ಛಲದ ಮನಕೆ ಗೆಲುವೆಂದ ಬಿಳಿಗಿರಿ - 15


ರಥಸಪ್ತಮಿಯ ತೇರನೇರಿ ಮೂಡಣದಿ

ರವಿಯು ಮನುಜ ಮಾಲಿನ್ಯ ಕಂಡ

ರಗಳೆ ತೀರಿದರೆ ಪ್ರಪಂಚ ನೆಮ್ಮದಿಯೆಂದ ಬಿಳಿಗಿರಿ - 16


ಬಾನಂಗಳದ ಚಿತ್ತಾರ ಕಾಣುವ

ಭಾಗ್ಯ ಕರುಣಿಸಿದ ಭವತ್ಪ್ರಭು

ಬ್ಯಾನೆಯಿಂದ ಹಾಳುಗೆಡವದಿರಿಯೆಂದ ಬಿಳಿಗಿರಿ - 17


ಸಾಧಿಸಿದ್ದಿಷ್ಟು ಎತ್ತರಕ್ಕೆ ಜೀವನಪಥದಲಿ

ಸಾಧಿಸಬೇಕು ಮತ್ತಷ್ಟು ಎತ್ತರಕ್ಕೆ

ಸಂಯಮವಿದ್ದರೆ ಗುರಿ ಬಳಿಯೆಂದ ಬಿಳಿಗಿರಿ - 18


ಬಂಡೆ ರೀತಿ ಮನ ಗಟ್ಟಿಯಿರಲಿ

ಬಂದಿಯಾಗದೆ ಹರಿವ ನೀರ ರೀತಿ ಮಾತಿರಲಿ

ಬಯಸದೆ ಬರುವುದು ಭಾಗ್ಯವೆಂದ ಬಿಳಿಗಿರಿ - 19


ಮೇಘವು ತನ್ನಾಸೆಯ ಬದಿಗಿಟ್ಟು

ಮನುಜ ಜೀವರಾಶಿಯ ರಕ್ಷಿಸುವುದು

ಮೋಡ ರೀತಿಯ ಬದುಕು ಅನುದಿನವೆಂದ ಬಿಳಿಗಿರಿ - 20


ಜೀವಕೆ ಬರುವುದು ಸವಾಲು ಅಲೆಯ ರೀತಿ

ಜನ್ಮಕ್ಕೆ ರವಿ ಪಾಠ ಮೊಡವೆದುರಿಸುವ ಪರಿ

ಜಡತ್ವ ತೊರೆದರೆ ಗೆಲುವೆಂದ ಬಿಳಿಗಿರಿ - 21


ಬದುಕಿಗೆ ಸಿಗುವುದು ನೂರಾರು ತಿರುವು ಉಗ್ಗುತಗ್ಗು

ಬರುವ ತಂಗಾಳಿ ಬಿರುಗಾಳಿಗೆ ಮೈಯೊಡ್ಡುವ

ಭೂತಾಯಿಯ ತಾಳ್ಮೆ ನಿನಗೆ ಬೇಕೆಂದ ಬಿಳಿಗಿರಿ - 22


ಗಾಳಿ ದೇಹವ ಒತ್ತಿದರೂ ಮನಕೆ ತಿಳಿಯದು

ಗೋಪುರವೆಷ್ಟೇ ದೂರವಿದ್ದರೂ ಕಾಣುವುದು

ಗಹನಪಥ ಮನುಜಗೆ ನೆರವೆಂದ ಬಿಳಿಗಿರಿ - 23


ಜಗಕೆ ಬರುವ ಒಂಟಿ ಜೀವಕೆ

ಜಯಬೇಕು ಸತ್ಯಮಾರ್ಗದಲಿ ನಡೆದು

ಜಂಜಾಟದ ಬದುಕು ವರ್ಣಮಯವೆಂದ ಬಿಳಿಗಿರಿ - 24


ಮೋಡ ನೋವುಂಡರೆ ಪ್ರಪಂಚಕೆ ಹಸಿರು

ಮಾನವ ಮೌಲ್ಯಗಳಿಟ್ಟುಕೊಂಡರೆ ಶ್ರೇಯಸ್ಸು

ಮಿಥ್ಯಾಸತ್ಯಗಳನ್ನರಿತರೆ ಬಾಳ್ವೆಯೆಂದ ಬಿಳಿಗಿರಿ - 25


ಮನದ ಕೋಟೆಯಲಿ ಕೆಸರ ತುಂಬಿಕೊಂಡು

ಮಾತು ಹಸಿರಾಡಿದರೇನು ಪ್ರಯೋಜನ

ಮನವೆಂಬ ಮನೆಗೆ ಪ್ರೀತಿ ಇಟ್ಟಿಗೆಯೆಂದ ಬಿಳಿಗಿರಿ - 26


ಕಾನನದ ಬೆಂಕಿಗೆ ಮರ ಸುಟ್ಟು ಬೂದಿಯು

ಕೊಡಲಿ ಪೆಟ್ಟಿಗೆ ಮರ ಛಿದ್ರವಾಗುವುದು

ಕಠಿಣ ಪದಗಳ ಗಾಯ ಮಾಸದೆಂದ ಬಿಳಿಗಿರಿ - 27


ದಾರಿಯ ಗುರಿಗೆ ಬೇಕು ನಾಲ್ಕು

ಧರ್ಮ ಅರ್ಥ ಕಾಮ ಮೋಕ್ಷಗಳು

ದೈವತ್ವದ ಹಾದಿಗೆ ಬುನಾದಿಯೆಂದ ಬಿಳಿಗಿರಿ - 28


ಬಿಸಿಲಿನಾ ತಾಪಕೆ ಹಸಿರು ಕಾಣದು

ಬಿಸಿಲ್ಮುಗಿದೊಡೆ ಮಳೆಗೆ ಹಸಿರ ಚಿಗುರು

ಬರುವ ತಾಪತಂಪು ಕಷ್ಟಸುಖವೆಂದ ಬಿಳಿಗಿರಿ - 29


ಬಾಳುವ ಹಾದಿಯಲಿ ಧುಮ್ಮಿಕ್ಕಿ ಬರುವ ಜಂಜಾಟಗಳು

ಬದುಕಿನಾ ಜೂಜಾಟದಲ್ಲಿರುವ ಅಲ್ಪ ಸುಖಗಳು

ಬವಣೆಗಳಿದ್ದರೂ ಜಗವ ಸುಖ ಪಡಿಸೆಂದ ಬಿಳಿಗಿರಿ - 30


ಬಾಡಿದಾ ಹೂಮಾಲೆ ದೇವರಿಗರ್ಪಿಸುವರೇ

ಬಾರದ ಕೆಲಸ ಮಾಡಿದರೆ ಪ್ರತಿಫಲ ಸಿಗುವುದೇ

ಬರುವ ಕೆಲಸದಲಿ ಪ್ರತಿಫಲ ಕಾಣೆಂದ ಬಿಳಿಗಿರಿ - 31


ಹಸಿರಿನಾ ಸಿರಿ ಬಾಲ್ಯದಲ್ಲಿ ಬೆಳೆಸಿ

ಹರೆಯದಲಿ ಸಿರಿಯಾಸೆಗೆ ಕೊಡಲಿ ಇಟ್ಟ

ಹಾಹಾಕಾರಕೆ ಪ್ರಪಂಚ ತೊರೆಯೆಂದ ಬಿಳಿಗಿರಿ - 32


ಮನುಜ ಬಾಳಿನಾ ಪಥದಲಿರುವ ಸಿಹಿಕಹಿಗಳು

ಮತ್ತೆ ಮತ್ತೆ ಜೀವಕೆ ಬರಡು ಹಸಿರುಗಳು

ಮರಳಿ ಕಾಲನ ಹಿಂದೆ ದಿಗಂತದತ್ತ ಎಂದ ಬಿಳಿಗಿರಿ - 33


ಒಂದರಾ ಮೇಲೊಂದು ಬರುವ ಋತುಮಾಸಗಳು

ಒಬ್ಬರಾ ಹಿಂದೆ ಮತ್ತೊಬ್ಬರು ಕಾಲನ ಹಿಂದೆ

ಒಂಟಿಯಾಗಿರದ ಪ್ರಕೃತಿ ಮತ್ತೆ ಗರ್ಭವತಿಯೆಂದ ಬಿಳಿಗಿರಿ - 34


ಕಾನನದ ಬೆಂಕಿಗೆ ಮರ ಸುಟ್ಟು ಬೂದಿಯು

ಕೊಡಲಿ ಪೆಟ್ಟಿಗೆ ಮರ ಛಿದ್ರವಾಗುವುದು

ಕಠಿಣ ಪದಗಳ ಗಾಯ ಮಾಸದೆಂದ ಬಿಳಿಗಿರಿ - 35


ಬಿಸಿಲಿನಾ ತಾಪಕೆ ಹಸಿರು ಕಾಣದು

ಬಿಸಿಲ್ಮುಗಿದೊಡೆ ಮಳೆಗೆ ಹಸಿರ ಚಿಗುರು

ಬರುವ ತಾಪತಂಪು ಕಷ್ಟಸುಖವೆಂದ ಬಿಳಿಗಿರಿ - 36


ಚಿಂತನೆಯ ಮಾಡದೆ ತಾರುಣ್ಯವ ಕಳೆದು

ಚಿಂತೆಯೆಂಬ ಚಿತೆಯಲ್ಲಿ ಜೀವನವ ಬೇಯಿಸಿ

ಚಿಂತಕನೆನ್ನುವಲಿ ಪ್ರಪಂಚದಿ ತೊಲಗೆಂದ ಬಿಳಿಗಿರಿ  - 37


ಮನುಜ ಜನ್ಮವು ಮಣ್ಣಿನಾ ರೂಪದ ಹೆಂಟೆ

ಮರಣಕಾಲಕೂ ಮಣ್ಣ ಹೆಂಟೆಯೋ ಇಲ್ಲಾ

ಮಣ್ಣ ಮೂರ್ತಿಯೋ ವಿಚಾರಮಾಡೆಂದ ಬಿಳಿಗಿರಿ   - 38


ಮನೆಯ ಒಪ್ಪ ಓರಣದಿ ಸಿಂಗರಿಸಿ

ಮಂದಿಯಾ ಕರೆದು ಮೆರೆದು ಅಹಂಕಾರದಲಿ

ಮತ್ತೆಯಲಿ ಮೀಯಬೇಡ ಎಂದ ಬಿಳಿಗಿರಿ - 39


ಕರಿಬೇವಿನ ಸ್ವಾದ ಒಗ್ಗರಣೆಯ ಜೊತೆ ಚಂದ

ಕೆಲಸವಾದ ಮೇಲೆ ಬೇಡವಾಗಿದೆ ಅದರ ಅಗತ್ಯ

ಕೀಳಾದ ಮನದಲಿ ಸಹಾಯವ ನೆನೆಯೆಂದ ಬಿಳಿಗಿರಿ - 40


ಸಮುದ್ರದಲೆಯ ತೆರೆಯು ಮೇಲೆದ್ದು ಪುನಃ ಬೀಳುತ್ತದೆ

ಸಮಾಧಾನ ಅತೃಪ್ತಿಗಳು ಸಾಗರದ ಅಲೆಯ ರೀತಿಯು

ಸಮಾನವಾಗಿ ತೃಪ್ತಿ ಅತೃಪ್ತಿ ಸ್ವೀಕರಿಸೆಂದ ಬಿಳಿಗಿರಿ  - 41


ಕಂಬಳಿ ಹುಳ ಚೆಟ್ಟೆಯೆಂದರೂ ಇಷ್ಟಪಡುವುದಿಲ್ಲ

ಕೆಲಸದಿ ತೋರಿದ ಸಾಧನೆಗೆ ಸಾದಕನ ಆದರಿಸುವರು

ಕಪಟವಾಡದೇ ಜೀವನ ಗುರಿ ಸಾಧಿಸೆಂದ ಬಿಳಿಗಿರಿ - 42


ಮನುಜ ಗುಣವ ಬದಲಿಸಲು ಸಲಹೆಯಿಂದ ಸಾಧ್ಯವಿಲ್ಲ

ಮತ್ತೆ ಕಾದ ನೀರು ಬಿಸಿಯಿಂದ ತಣ್ಣಗಾದಂತೆ

ಮಾನವನ ಗುಣವೂ ಕೂಡ ಎಂದ ಬಿಳಿಗಿರಿ - 43


ಅವಯವದ ಅವಸನ ವಯಸ್ಸಿನ ಸಹಜ ಗುಣ

ಅಪೇಕ್ಷೆಯು ಮುದುಕನಿಗೆ ದೊಣ್ಣೆ ಹಿಡಿಸಿ ನಡೆಸುವುದು

ಆಸೆಯ ವಾತರೋಗ ಬಿಟ್ಟು ಜಗಕಾಗೆಂದ ಬಿಳಿಗಿರಿ - 44


ಬಾಡಿದ ಹೂಮಾಲೆ ದೇವರ ಚರಣಗಳಿಗರ್ಪಿಸುವರೇ
ಬಾರದ ಕೆಲಸವ ಮಾಡಿದರೆ ಪ್ರತಿಫಲ ಸಿಗುವುದೇ
ಬರುವ ಕೆಲಸದಲಿ ಪ್ರತಿಫಲ ಕಾಣೆಂದ ಬಿಳಿಗಿರಿ - 45

ಮಿಂಚಿನ ಹಾದಿಯನ್ನು ಗುರುತಿಸುವರಾರು

ಮೇಘಗಳ ಗತಿಯನ್ನು ಬದಲಿಸುವವರಾರು

ಮಿಂಚಿನೋಟದಿ ಕೆಲಸ ಮುಗಿಸೆಂದ ಬಿಳಿಗಿರಿ - 46


ಮನಸಿನಾ ಬೇಗೆಗೆ ತಣ್ಣೀರು ಎರೆಯುವರಾರು

ಮಾತಿನ ಚಾಟಿಗೆ ಹಿಡಿತವ ಇಡುವವರಾರು

ಮನಸಿನಾ ಮಾತಿಗೆ ಬೆಲೆಯೆಂದ ಬಿಳಿಗಿರಿ - 47


ಮಾತು ಮಾತಿಗೂ ಮದದ ಮಾತಾಡಿ

ಮತ್ಸರದಿಂದ ಮಂದಿಯ ಮನ ಕದಡಿ

ಮಾಯಾ ಲೋಕದಿ ಜೀವಿಸಬೇಡೆಂದ ಬಿಳಿಗಿರಿ - 48


ನಿತ್ಯವು ನಡೆಸುವೆವು ಜೀವನ ಸಂಘರ್ಷಗಳು

ನೇಸರ ಮೂಡಿದಾಕ್ಷಣ ನಡೆವುದು ಹೋರಾಟ

ನಾಯಕ ಬವಣೆ ಸಂಘರ್ಷ ಗೆಲ್ಲುವನೆಂದ ಬಿಳಿಗಿರಿ - 49


ಬರುವ ಕಷ್ಟಗಳು ಕಾಣುವಾ ಬಂಡೆಯ ಹಾಗೆ

ಬಂಡೆಗಳ ಒಡೆಯಲು ಬೇಕು ಹಾರೆ ಗುದ್ದಲಿಗಳು

ಬದುಕಿನ ಧೈರ್ಯಸಾಹವೇ ಹಾರೆ ಗುದ್ದಲಿಯೆಂದ ಬಿಳಿಗಿರಿ - 50



ಕರ್ತೃ- ವೆಂಕಟರಂಗ ಮೈಸೂರು



-----ಮುಂದುವರೆಯುವುದು--------