My Blogs

Sunday, January 05, 2020

ಸಂಸಾರ ಸಾಗರ ಮತ್ತು ಜ್ಞಾನ ಸಂಪಾದನೆ

ಸಂಸಾರಕ್ಕೂ ಸಾಗರಕ್ಕೂ ಸಾಕಷ್ಟು ಸಾಮ್ಯತೆ ಇದೆ. ಸಾಗರವಾಗಲಿ ಸಂಸಾರವಾಗಲಿ ರಹಸ್ಯದ ಗೂಡಾಗಿದೆ. ಸಾಗರದಲ್ಲಿ ಭಯಂಕರವಾದ ಮೀನುಗಳಷ್ಟೆ ಅಲ್ಲದೆ ತಿಮಿಂಗಲಗಳು ಇದೆ. ಹಾಗೆಯೇ ಅತ್ಯಂತ ಅಮೂಲ್ಯವಾದ ಮುತ್ತು ರತ್ನಗಳಿವೆ. ಸಂಸಾರದಲ್ಲೂ ಅಷ್ಟೆ. ಸಾಕಷ್ಟು ಭಯ ಭೀಕರತೆ ಉಂಟುಮಾಡುವ ವಿಷಯಗಳಿವೆ. ಇದೆಲ್ಲದರ ಮಧ್ಯೆಯೂ ಕೂಡ ಸಾಕಷ್ಟು ಸುಖವನ್ನು ಶಾಂತಿಯನ್ನು ಕೊಡತಕ್ಕ ವಸ್ತುಗಳೂ ಕೂಡ ಇದೆ.

ಸಾಗರದಲ್ಲಿ ಅಲೆಗಳು ಕೆಲವು ಸಾರಿ ದೊಡ್ಡದು ಕೆಲವು ಸಾರಿ ಸಣ್ಣದು ಬರುತ್ತವೆ. ಅದೇ ರೀತಿ ಸಂಸಾರದಲ್ಲೂ ಕೆಲವು ಸಾರಿ ಕಷ್ಟದ ಅಲೆಗಳು ಬಂದು ಮುಖಕ್ಕೆ ಅಪ್ಪಳಿಸುತ್ತದೆ. ಕಷ್ಟದ ಅಲೆಗಳನ್ನು ಎದುರಿಸಿಕೊಂಡು, ಭೇದಿಸಿಕೊಂಡು ಹೋದರೆ ಮಾತ್ರ ನಾವು ಹುಡುಕುವ ಮುತ್ತು ರತ್ನಗಳು ಸಿಗುತ್ತದೆ. ಜೀವನದಲ್ಲಿ ಕಷ್ಟವನ್ನು ಎದುರಿಸಿ ಮುನ್ನಡೆದರೆ ಮಾತ್ರ ಸುಖಮಯವಾಗಿರುತ್ತದೆ. ಕಷ್ಟದ ಅಲೆಗಳಿಗೆ ಹೆದರಿದರೆ ಖಂಡಿತವಾಗಿ ಯಶಸ್ಸು ಸಿಗುವುದಿಲ್ಲ.

ಹಾಗಾದರೆ ಸಂಸಾರ ಸಾಗರವನ್ನು ದಾಟುವುದು ಹೇಗೆ? ಸಂಸಾರ ಸಾಗರದಲ್ಲಿ ಪ್ರಯಾಣಿಸುವ ಹಡಗು ಯಾವುದು?

ರುದೇಹ ಮಾಧ್ಯಂ ಸುಲಭಂ ಸುಧುರ್ಲಭಂ | ಪ್ಲವಂ ಸುಕಲ್ಪಂ ಗುರುಕರ್ಣಧಾರಂ | ಮಯಾನುಕುಲೇನ ನವಸ್ವತೇರಿತಂ | ತುಮಾನ್ ಭವಾಬ್ಧಿಂ ನತರೇಸ ಆತ್ಮಃ |

ಅತ್ಯಂತ ದುರ್ಲಭವಾದ ಮನುಷ್ಯ ಜನ್ಮ ಬಂದಿದೆ. ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬಾರದು. ವ್ಯರ್ಥ ಮಾಡಿಕೊಳ್ಳಬಾರದೆಂದರೆ ನಮಗೆ ಮಾರ್ಗದರ್ಶನ ನೀಡುವ ಒಳ್ಳೆಯ ಗುರು ಬೇಕು. ದೇಹವೇ ಹಡಗು. ಹಾಗಾದರೆ ನಾವಿಕ ಯಾರು? ಅರಿವನ್ನು ಕೊಡುವ ಜ್ಞಾನವನ್ನು ಕೊಡುವ ಗುರುವೇ ನಾವಿಕ. ಯಾವುದೇ ವಿಷಯವಾದರೂ ಸರಿ ಅದನ್ನು ಅರಿತು ಜಿಜ್ಞಾಸೆಗೊಳಪಡಿಸಿ ಅರ್ಥಮಾಡಿಕೊಂಡು ಆಸಕ್ತರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುವವನೇ ಗುರು. ಮನುಷ್ಯ ಜನ್ಮದಲ್ಲಿ ಜೀವನದ ಏರುಪೇರಿನ ಅಲೆಗಳನ್ನು ಅರ್ಥಮಾಡಿಕೊಂಡು ಗುರುವಿನ ಮಾರ್ಗದರ್ಶನದಿಂದ ನಡೆದರೆ ಮಾತ್ರ ಮನುಷ್ಯ ಜನ್ಮಕ್ಕೆ ಒಂದು ಸಾರ್ಥಕತೆ. ಇಲ್ಲದಿದ್ದರೆ ಮನುಷ್ಯ ಜನ್ಮ ನಿರರ್ಥಕ.

ಎಳ್ಳಿನಲ್ಲಿರುವ ಎಣ್ಣೆಯನ್ನು ತೆಗೆಯಲು ಎಳ್ಳನ್ನು ಗಾಣಕ್ಕೆ ಹಾಕಿ ತಿರುಗಿಸಿದರೆ ಅದರಲ್ಲಿರುವ ಎಣ್ಣೆ ಹೊರಬರುವುದು. ಬೆಣ್ಣೆ ತೆಗೆಯಬೇಕಾದರೆ ಮೊಸರನ್ನು ಕಡೆದರೆ ಮಾತ್ರ ಸಿಗುತ್ತದೆ. ನಮ್ಮೆಲ್ಲರ ಅಂತರಾಳದಲ್ಲೂ ಒಂದು ಅಧ್ಬುತವಾದ ಶಕ್ತಿಯಿದೆ. ಅದನ್ನು ಗುರುತಿಸಿಕೊಳ್ಳಬೇಕೆಂದರೆ ಸಾಧನೆ ಮುಖ್ಯವಾಗುತ್ತದೆ. ಸಾಧನೆಗೆ ಬೇಕಾಗಿರುವುದು ಶ್ರಮವೇ? ಹೌದು ಶ್ರಮದ ಜೊತೆಗೆ ಮಾಡುವ ಕೆಲಸದಲ್ಲಿ ಸತ್ಯವೂ ಇರಬೇಕು. ಸತ್ಯದ ಜೊತೆಗೆ ಸರಿದಾರಿ ತೋರುವ ಗುರುವೂ ಬೇಕು.

ಯಾಗಕ್ಕೆ ಬೇಕಿರುವುದು ಪ್ರಥಮವಾಗಿ ಅಗ್ನಿ. ಅಗ್ನಿಯನ್ನು ಉತ್ಪತ್ತಿ ಮಾಡಿ ಯಾಗಕುಂಡದಲ್ಲಿ ಹಾಕುತ್ತಾರೆ. ಅನಂತರ ಒಂದೆರಡು ಸಮಿತ್ತೋ ಇಲ್ಲ ಕಟ್ಟಿಗೆಯನ್ನು ಇಟ್ಟು ಒಂಚೂರು ತುಪ್ಪವನ್ನು ಹಾಕಿ ಬೀಸಣಿಗೆಯಿಂದ ಗಾಳಿ ಬೀಸಿದರೆ ಯಾಗ ಮಾಡಲು ಸಿದ್ಧವೆಂದರ್ಥ. ಇದನ್ನು ಮತ್ತೊಂದು ರೀತಿ ಅರ್ಥೈಸಿದರೆ ಯಾಗಕ್ಕೆ ಬೇಕಾದ ಅಗ್ನಿಗೆ ನಾವು ಉಪಯೋಗಿಸುವ ಕಡ್ಡಿಪೆಟ್ಟಿಗೆ ಮತ್ತು ಬೆಂಕಿಕಡ್ಡಿ ಗುರುಶಿಷ್ಯ್ರರಂತೆ. ಇವರಿಬ್ಬರೂ ಕಲೆತು ಮಾಡಿದ ಅಧ್ಯಯನದ ಫಲವೇ ಜ್ಞಾನ. ಅಂದರೆ ಬೆಂಕಿ ಕಟ್ಟಿಗೆಯಲ್ಲಿ ಸುಪ್ತಾವಸ್ಥೆಯಲ್ಲಿರುತ್ತದೆ. ಗುರುವಿನ ಉಪದೇಶ (ಅಗ್ನಿ) ಶಿಷ್ಯನಲ್ಲಿ ಜಾಗೃತಗೊಳಿಸುತ್ತದೆ.

ಬರೀ ಓದಿದರೆ ವಿಷಯಗಳು ಗೊತ್ತಾಗುವುದಿಲ್ಲ. ಓದುವ ಮನುಷ್ಯನ ಮನಸ್ಸು ಓದುತ್ತಿರುವ ವಿಷಯದ ಮೇಲೆ ಕೇಂದ್ರೀಕೃತವಾಗಿರಬೇಕು. ಆಗಲೇ ಓದಿದ್ದಕ್ಕೆ ಸಾರ್ಥಕತೆ ಬರುವುದು. ಅನೇಕ ವೇಳೆ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಓದುತ್ತಾರೆ. ಆದರೆ ಎಲ್ಲಾ ಮರೆತುಹೋಗುತ್ತದೆ. ಅವರು ನಪಾಸಾಗುವ ಕಾರಣ ಓದಿನ ಅಭಾವವಲ್ಲ. ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿಯಿರುವುದಿಲ್ಲ. ಯಾಕೆಂದರೆ ಮನಸ್ಸನ್ನು ಕೇಂದ್ರೀಕರಿಸಿ ಓದಿರುವುದಿಲ್ಲ. ಧೂಳಿನಿಂದ ಕೂಡಿದ ಕನ್ನಡಿಯನ್ನು ಒರೆಸಿದ ಮೇಲೆ ಹೇಗೆ ಅದು ಪ್ರಕಾಶಿಸುವುದೋ ಅದರಂತೆ ಮನುಷ್ಯನು ತನ್ನ ಸುಪ್ತಮನಸ್ಸನ್ನು ಜಾಗೃತಗೊಳಿಸಿದರೆ ಅವನಲ್ಲಿರುವ ಜ್ಞಾನವು ಅವನನ್ನು ಎತ್ತರಕ್ಕೆ ಬೆಳೆಸುವುದು ಮತ್ತು ಸಂಸಾರ ಸಾಗರದಲ್ಲಿ ಬರುವ ಏರುಪೇರಿನ ಅಲೆಗಳನ್ನು ನಿಭಾಯಿಸಿ ಜೀವನ ಸಾರ್ಥಕತೆ ಗಳಿಸಿಕೊಳ್ಳುವನು.

0 Comments:

Post a Comment

Subscribe to Post Comments [Atom]

<< Home