My Blogs

Saturday, January 11, 2020

ದ್ವಂದ್ವ ಭಾವಗಳು


ಸುಖ-ದು:,  ಹಗಲು-ಇರಳು, ಶೀತ-ಉಷ್ಣ, ಒಳ್ಳೆಯತನ-ಕೆಟ್ಟತನ


ಸೂರ್ಯ 24 ಘಂಟೆಗಳೂ ಇರುತ್ತಾನೆಂದರೆ ನಮ್ಮೆಲ್ಲರಿಗೂ ಅದು ಅಸಹನೀಯವಾಗಿರುತ್ತದೆ. ಹೇಗೆ ಸೂರ್ಯೋದಯವನ್ನು ಕಂಡು ಖುಷಿ ಪಡುತ್ತೇವೆಯೋ ಅದೇ ರೀತಿ ಚಂದ್ರೋದಯವನ್ನು ಕಾಣುವ ನಾವು ಅಷ್ಟೆ ಸುಖಿಸುತ್ತೇವೆ. ಸೂರ್ಯನ ತಾಪವೂ ಬೇಕು. ಚಂದ್ರನ ತಂಪೂ ಬೇಕು.

ಅದೇ ರೀತಿ ದು: ಬಂದಾಗ ಜೀವನದಲ್ಲಿ ಪಾಠವನ್ನು ಕಲಿಯಬೇಕು. ಅದರಿಂದ ಜೀವನಾನುಭವ ಆಗುತ್ತದೆ. ಬರೀ ಸುಖ ಇದ್ದರೆ ನಮಗೆ ಜೀವನದ ಗುರಿ ಗೊತ್ತೇ ಆಗುವುದಿಲ್ಲ. ಉತ್ತಮ ಉದಾಹರಣೆಯೆಂದರೆ ಸಿದ್ದಾರ್ಥನ ಕಥೆ. ಅರಮನೆಯೊಳಗೆ ಅವನಿಗೆ ಎಲ್ಲವೂ ಸಿಗುತ್ತಿತ್ತು. ಅದೊಂದು ದಿನ ಅರಮನೆಯಿಂದ ಆಚೆ ಬಂದಾಗ ಜನರ ದು: ತಿಳಿಯುತ್ತದೆ. ಅದರಿಂದ ಅವನು ಮುಂದೆ ಬುದ್ದನಾಗಿ ಜಗದೊದ್ಧಾರ ಮಾಡಿದ. ಅದೇ ರೀತಿ ಕನಕದಾಸರು ಸಹ.


ಪ್ರಪಂಚದಲ್ಲಿ ಒಳ್ಳೆಯತನ ಕೆಟ್ಟತನ ಪ್ರತಿಯೊಬ್ಬ ಮನುಷ್ಯನಲ್ಲೂ ಇರುತ್ತದೆ. ಅದೊಂದು ದಿನ ದ್ರೋಣಾಚಾರ್ಯರು ಯುಧಿಷ್ಠಿರನನ್ನು ಕರೆದು ಹಸ್ತಿನಾಪುರದಲೆಲ್ಲಾ ಓಡಾಡಿ ಸಂಜೆಯ ಹೊತ್ತಿಗೆ ಒಬ್ಬ ಕೆಟ್ಟ ಮನುಷ್ಯನನ್ನು ಕರೆದುಕೊಂಡು ಬಾ ಎಂದರು ಅದೇ ರೀತಿ ದುರ್ಯೋಧನನನ್ನು ಕರೆದು ಒಬ್ಬ ಒಳ್ಳೆಯ ಮನುಷ್ಯನನ್ನು ಕರೆದುಕೊಂಡು ಬಾ ಎಂದರು. ಸಂಜೆಯ ಹೊತ್ತಿಗೆ ಇಬ್ಬರೂ ಬರಿಗೈಯಲ್ಲಿ ಮರಳಿ ದ್ರೋಣಾಚಾರ್ಯರ ಹತ್ತಿರ ಬಂದರು. ಯುಧಿಷ್ಠಿರನು ಗುರುಗಳೆ ನಾನು ಹುಡುಕಲು ಹೋದಾಗ ಕೆಟ್ಟವರು ಎಂದು ತಿಳಿದು ಹತ್ತಿರ ಹೋಗುವಷ್ಟರಲ್ಲಿ ಅವರಲ್ಲೊಂದು ಒಳ್ಳೆ ಗುಣ ಕಾಣುತ್ತಿದ್ದೆ. ಹಾಗಾಗಿ ನನಗೆ ಯಾರೂ ಕೆಟ್ಟವರು ಕಾಣಲಿಲ್ಲ ಎಂದನು. ಅದೇ ರೀತಿ ದುರ್ಯೋಧನನು ಎಲ್ಲ ಕಡೆ ತಿರುಗಿದೆ. ಆದರೆ ಒಳ್ಳೆಯವರು ಯಾರೂ ನನಗೆ ಕಾಣಲಿಲ್ಲ ಎಂದನು. ನೋಡಿ ಹಸ್ತಿನಾಪುರ ಒಂದೇ. ಆದರೆ ಇಬ್ಬರ ನೋಡುವ ದೃಷ್ಟಿಕೋನ ಮಾತ್ರ ಬೇರೆ. ನಮ್ಮ ಅಂತರಂಗದಲ್ಲಿ ಒಳ್ಳೆಯ ದೃಷ್ಟಿ ಇದ್ದರೆ ಪ್ರಪಂಚವೆಲ್ಲಾ ಒಳ್ಳೆಯದಾಗಿ ಕಾಣುತ್ತದೆ. ನಮ್ಮ ಅಂತರಂಗದಲ್ಲಿ ಕಶ್ಮಲತೆ ಇದ್ದರೆ ಪ್ರಪಂಚವೆಲ್ಲಾ ದೋಷಪೂರಿತವಾಗಿ ಕಾಣುತ್ತದೆ.


ಹಾಗಾದರೆ ನಾವು ಉದ್ದಾರವಾಗಬೇಕಾದರೆ ಏನು ಬೇಕು? ಗುಣಗ್ರಾಹಿಗಳಾಗಿರಬೇಕು. ಪ್ರತಿನಿತ್ಯ ಮುಂಜಾನೆಯ ಸೂರ್ಯನನ್ನು ಕಂಡ ಕೂಡಲೆ ಅತ್ಯಂತ ಖುಷಿಪಡುತ್ತೇವೆ. ಮೊದಲು ಕೆಂಪುಛಾಯೆ ಕಾಣುತ್ತಿದ್ದಂತೆಯೆ ಹಕ್ಕಿಪಕ್ಷಿಗಳು ಸಡಗರದಿಂದ ಚಿಲಿಪಿಲಿ ಮಾಡುತ್ತಾ ಹಾರುತ್ತಿರುತ್ತವೆ. ಕ್ಷಣ ಪಶು, ಪಕ್ಷಿ, ಮನುಷ್ಯ ಯಾರಿಗಾದರೂ ಸರಿ ಆನಂದ ತರುವ ಕ್ಷಣ. ಹಾಗಾದರೆ ಆನಂದವು ಅನಂತವೇ? ಇಲ್ಲ ಯಾಕೆಂದರೆ ಸೂರ್ಯನು ಯಾವಾಗ ಮಟ ಮಟ ಮಧ್ಯಾಹ್ನ ನೆತ್ತಿ ಮೇಲೆ ಬರುತ್ತಾನೊ ಆಗ ಯಾವ ಜನರು ಮುಂಜಾನೆಯ ಸೂರ್ಯನನ್ನು ಕಂಡು ಖುಷಿ ಪಟ್ಟರೋ ಅದೇ ಜನರು ಮಧ್ಯಾಹ್ನ ಸೂರ್ಯ ಎಷ್ಟೊಂದು ತಾಪ ಕೊಡುತ್ತಿದ್ದಾನೆ ಎಂದು ದೂರುತ್ತಾರೆ. ಜಗತ್ತಿನ ಕಣ್ಣಾಗಿರುವ ಸೂರ್ಯನಲ್ಲೂ ದೋಷ ಹುಡುಕುತ್ತೇವೆ. ಆದರೆ ದೋಷ ಇರುವುದು ನಮ್ಮ ದೃಷ್ಟಿಕೋನದಲ್ಲಿ. ಗುಣಗ್ರಾಹಿಯಾಗಿ ಯೋಚಿಸಿದರೆ ನಿಜ ತಿಳಿಯುತ್ತದೆ. ಸೂರ್ಯನು ಅಷ್ಟು ಶಾಖವನ್ನು ಉತ್ಪಾದಿಸಿದರೆ ಮಾತ್ರ ಸಮುದ್ರದ ನೀರು ಆವಿಯಾಗಿ ಮೋಡವಾಗಿ ಬರಡುಭೂಮಿಯಲ್ಲಿ ಮಳೆ ಸುರಿಯಲಿಕ್ಕೆ ಕಾರಣವಾಗುತ್ತದೆ.


ಆದ್ದರಿಂದ ನಾವು ಯಾವಾಗಲೂ ಯಾರಲ್ಲೂ ದೋಷವನ್ನು ಹುಡುಕದೆ ಗುಣಗ್ರಾಹಿಗಳಾಗಿರಬೇಕು. ಅವರಲ್ಲಿರುವ ಒಳ್ಳೆಗುಣಗಳನ್ನು ಮಾತ್ರ ಎತ್ತಿಹಿಡಿಯಬೇಕು. ಹಾಗು ಅವರ ದೋಷವನ್ನು ಹೇಳಬೇಕೆಂದರೆ ಏಕಾಂತದಲ್ಲಿ ಕರೆದು ಅವರ ಹತ್ತಿರ ಹೇಳಬೇಕು. ನಾಲ್ಕು ಜನರ ಮುಂದೆ ಮತ್ತೊಬ್ಬರ ದೋಷವನ್ನು ಹೇಳಬಾರದು.


ಪರಚಿದ್ರೇಷು ಹೃದಯಂ ಪರವಾರ್ತಾಸು ಶ್ರವಃ ಪರ ಮರ್ಮಣಿ ವಾಚಂಚ ಖಲಾನಾಮಸೃಜದ್ವಿದಿಃ


ಯಾವತ್ತೂ ಕೂಡ ದೋಷ ಹುಡುಕುವ ಮನಸ್ಸು, ಪರರ ವಿಚಾರವನ್ನು ನಿಂದನೆಯನ್ನು ಕೇಳುವ ಕಿವಿ, ಮತ್ತೊಬ್ಬರಿಗೆ ನೋವುಂಟಾಗುವ ಹಾಗೆ ಮಾತನಾಡುವ ನಾಲಿಗೆ ಇವೆಲ್ಲವೂ ಮನುಷ್ಯನಿಗೆ ದುರ್ಗತಿಯನ್ನುತರುತ್ತದೆ.


ಹಾಗಾಗಿ ನಮ್ಮ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ಪರಿಶುದ್ಧವಾಗಿರಬೇಕು. ಮಾತು ಮಧುರವಾಗಿರಬೇಕು. ಮತ್ತೊಬ್ಬರ ಸಂಕಟಕ್ಕೆ ಕಾರಣವಾಗಬಾರದು.



Picture Courtesy: Internet

0 Comments:

Post a Comment

Subscribe to Post Comments [Atom]

<< Home